ತೊಲ್‍ಕಾಪ್ಪಿಯರ್ -
ತಮಿಳು ಭಾಷೆಯಲ್ಲಿ ಈಗ ಸಿಗುವ ಗ್ರಂಥಗಳಲ್ಲಿ ಮೊದಲನೆಯದಾದ ತೊಲ್‍ಕಾಪ್ಪಿಯಂ ಎಂಬ ವ್ಯಾಕರಣ ಗ್ರಂಥವನ್ನು ರಚಿಸಿದವ. ಈ ಗ್ರಂಥ ತಮಿಳಿನ ವ್ಯಾಕರಣಗಳ ಚರಿತ್ರೆಯಲ್ಲಿ ಮೊದಲ ಸ್ಥಾನವನ್ನು ಪಡೆದಿರುವುದು ಮಾತ್ರವಲ್ಲ ಸಿದ್ಧಾಂತ ದೃಷ್ಟಿಯಿಂದಲೂ ಶ್ರೇಷ್ಠತೆಯನ್ನು ಪಡೆದಿದೆ. ಈ ವ್ಯಾಕರಣ ಗ್ರಂಥದಿಂದ ಗ್ರಂಥಕರ್ತನಿಗೆ ಈ ಹೆಸರು ಬಂದಿತೋ ಅಥವಾ ಗ್ರಂಥಕರ್ತನ ಹೆಸರಿನಿಂದ ಗ್ರಂಥಕ್ಕೆ ಈ ಹೆಸರಾಯಿತೋ ಎಂಬುದರ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಗ್ರಂಥಕರ್ತನ ನಿಜವಾದ ಹೆಸರೇ ಇದು ಎಂಬುವವರು ಕಾಪ್ಪಿಯ ಜಾತಿಯಲ್ಲಿ ಈ ಗ್ರಂಥಕರ್ತ ಹುಟ್ಟಿದನೆಂದು ಹೇಳುತ್ತಾರೆ. ಅಗಸ್ತ್ಯರ 12 ಮಂದಿ ಶಿಷ್ಯರಲ್ಲಿ ತೊಲ್‍ಕಾಪ್ಪಿಯರ್ ಒಬ್ಬ ಎಂಬುದು ಜನ ಸಾಮಾನ್ಯ ನಂಬಿಕೆ. ಈತ ಜಮದಗ್ನಿಯ ಪುತ್ರನೆಂದೂ ಪರಶುರಾಮನ ಸಹೋದರನೆಂದೂ ಈತನ ಹೆಸರು ತೃಣಧೂಮಾಗ್ನಿಯೆಂದೂ ಒಂದು ದಂತಕಥೆಯಿದೆ. ಆದರೆ ಇದಕ್ಕೆ ಆಧಾರಗಳೇನೂ ಇಲ್ಲ. ತೊಲ್‍ಕಾಪ್ಪಿಯರ್ ಕ್ರಿಸ್ತಪೂರ್ವದ ಕೆಲವು ಶತಮಾನಗಳಲ್ಲಿದ್ದಿರಬಹುದೆಂದು ಹಲವರ ಅಭಿಪ್ರಾಯ. ಕೇರಳ ಪ್ರಾಂತ್ಯದಲ್ಲಿ ಬಳಕೆಯಲ್ಲಿರುವ ಹಲವು ನುಡಿಕಟ್ಟುಗಳು ಈತನ ಗ್ರಂಥದಲ್ಲಿ ಸಿಗುವುದರಿಂದ ಈತ ತಿರುವಾಂಕೂರಿಗೆ ಸೇರಿದವನಾಗಿರಬೇಕೆಂದು ಇನ್ನು ಕೆಲವರ ಅಭಿಪ್ರಾಯ.

ತೊಲ್‍ಕಾಪ್ಟಿಯರ್ ತನ್ನ ಗ್ರಂಥದಲ್ಲಿ ಎನ್ಮನಾರ್ ಪುಲವರ್, ಎನ್‍ಬರ್ ಎಂದು ಹಲವೆಡೆಗಳಲ್ಲಿ ಹೇಳಿರುವುದರಿಂದ ಈ ವ್ಯಾಕರಣ ಗ್ರಂಥಕ್ಕಿಂತ ಹಿಂದೆ ತಮಿಳಿನಲ್ಲಿ ಹಲವಾರು ಗ್ರಂಥಗಳು ಇದ್ದರಬಹುದೆಂದು ಹೇಳಲಾಗುತ್ತದೆ.

ತೊಲ್‍ಕಾಪ್ಟಿಯಂನಲ್ಲಿ 1,640 ಸೂತ್ರಗಳಿವೆ. ಇದರಲ್ಲಿ ಎಂ¿ುತ್ತು, ಶೊಲ್, ಪೊರುಳ್ ಎಂಬ ಮೂರು ಅಧಿಕಾರಗಳಿವೆ. ಒಂದೊಂದು ಅಧಿಕಾರದಲ್ಲಿಯೂ 9 ವಿಭಾಗಗಳಿವೆ. ಎ¿ುತ್ತಧಿಕಾರದಲ್ಲಿ ಅಕ್ಷರ ಹಾಗೂ ಸಂಧಿ ಪ್ರಕರಣಗಳನ್ನು ಕುರಿತು ಹೇಳಲಾಗಿದೆ. ಈ ಅಧಿಕಾರದ ಮೊದಲ ವಿಭಾಗವಾದ ನೂನ್ ಮರಬು ಅಕ್ಷರಗಳ ಸಾಮಾನ್ಯ ಲಕ್ಷಣಗಳನ್ನೂ ಮೊಳಿಮರಬು ವಿಭಾಗ ಪದಗಳಲ್ಲಿ ಅಡಕವಾಗಿರುವ ಅಕ್ಷರಗಳ ಲಕ್ಷಣಗಳನ್ನೂ ಪಿರಪ್ಪಿಯಲ್ ವಿಭಾಗ ಅಕ್ಷರಗಳ ಸ್ಥಾನಗಳನ್ನೂ ಪುಣರಿಯಲ್ ವಿಭಾಗ ಅಕ್ಷರಗಳ ಸಂಧಿಲಕ್ಷಣಗಳನ್ನೂ ತೊಗೈ ಮರಬು ವಿಭಾಗ ಹಲವು ನಿಯಮಗಳೂ ಒಂದೊಂದೇ ಸೂತ್ರದೊಳಗೆ ಅಡಕವಾಗಿರುವಂತೆ ಮಾಡಿರುವ ವಿಭಾಗ. ಉರುವಯಲ್ ವಿಭಾಗ ವಿಭಕ್ತಿ ಪ್ರತ್ಯಯಗಳು ಪ್ರಕೃತಿಯೊಡನೆ ಸೇರಿದಾಗ ಆಗುವ ಸಂಧಿವ್ಯತ್ಯಾಸಗಳನ್ನೂ ಉಯಿರ್ ಮುಯಂಗಿಯಲ್ ವಿಭಾಗ ಸ್ವರಾಂತವಾದ ಪದ ಇನ್ನೊಂದು ಪದದೊಡನೆ ಸೇರಿದಾಗ ಆಗುವ ಸಂಧಿ ವ್ಯತ್ಯಾಸಗಳನ್ನೂ ಪುಳ್ಳಿಮಯಂಗಿಯಲ್ ವಿಭಾಗ ವ್ಯಂಜನಾಂತವಾದ ಪದ ಇನ್ನೊಂದು ಪದದೊಡನೆ ಸೇರಿದಾಗ ಆಗುವ ಸಂಧಿ ವ್ಯತ್ಯಾಸಗಳನ್ನೂ ಕೊನೆಯದಾದ ಕುಟ್ರಿಯಲ್ ಉಗರ ಪುಣರಿಯಲ್ ವಿಭಾಗ ಅರ್ಧ ಉಕಾರಾಂತವಾದ ಪದ ಇನ್ನೊಂದು ಪದದೊಡನೆ ಸೇರಿದಾಗ ಆಗುವ ಸಂಧಿವ್ಯತ್ಯಾಸಗಳನ್ನೂ ವಿವರಿಸುತ್ತವೆ.

ಸೊಲ್ಲಧಿಕಾರಂನಲ್ಲಿ ಪದವರ್ಗೀಕರಣ ಹಾಗೂ ಸಮಾಸಪ್ರಕರಣಗಳನ್ನು ಹೇಳಲಾಗಿದೆ. ಅಲ್ಲದೆ ಕಿಳವಿಯಾಕ್ಮಂ (ಪದಗಳು ಸಮಾಸವಾಗುವ ರೀತಿ) ವೇಟ್ರುವೈ ಇಯಲ್ (ವಿಭಕ್ತಿ ವಿಚಾರ), ವೇಟ್ರವೈ ಮಯಂಗಿಯಲ್ (ಒಂದರ ಬದಲಿಗೆ ಪ್ರಯೋಗವಾಗುವ ಇನ್ನೊಂದು ವಿಭಕ್ತಿಯ ವಿವೇಚನೆ), ವಿಳಿಮರಬು (ಸಂಭೋಧನಾವಿಭಕ್ತಿ ಲಕ್ಷಣ), ಪೆಯರಿಯಲ್ (ನಾಮಪದ ಲಕ್ಷಣ), ವಿನೈ ಇಯಲ್ (ಕ್ರಿಯಾಪದ ಲಕ್ಷಣ), ಇಡೈ ಇಯಲ್ (ಕ್ರಿಯಾಪದ ನಾಮಪದಗಳಿಗೆ ಹೊರತಾದುವುಗಳ ಲಕ್ಷಣ) ಉರಿ ಇಯಲ್ (ಅವ್ಯಯಗಳ ಲಕ್ಷಣ) ಎಚ್ಚ ಇಯಲ್ ಷಿ (ಇತರ ಲಕ್ಷಣಗಳು) - ಎಂಬ ವಿಭಾಗಗಳಿವೆ.

ಪೊರುಳಧಿಕಾರಂ ಎಂಬುದು ಈ ಗ್ರಂಥದಲ್ಲಿ ಒಂದು ಪ್ರತ್ಯೇಕ ವಿಭಾಗವಾಗಿದೆ. ಜನರ ಜೀವನವನ್ನು ಅಗವಾಳ್ವು (ಆಂತರಿಕ ಜೀವನ) ಪುರವಾಳ್ವು (ಬಾಹ್ಯ ಜೀವನ) ಎಂಬೆರಡು ರೀತಿಯಾಗಿ ವಿಭಜಿಸಬಹುದು. ಅಗವಾಳ್ವು ಪ್ರೇಮಸಂಬಂಧವಾದುದು. ಪುರವಾಳ್ವು ಅರಸರು ನಡೆಸುವ ಯುದ್ಧ ಮತ್ತು ಔದಾರ್ಯ ಮುಂತಾದುವನ್ನು ಸಂಬಂಧಿಸಿದುದು. ಇವನ್ನು ಅಂದರೆ ಐಹಿಕ ವಿಷಯಗಳನ್ನು ತಮಿಳಿನಲ್ಲಿ ಪೊರುಳ್ ಎನ್ನುತ್ತಾರೆ. ಈ ಅಧಿಕಾರದಲ್ಲಿ ಅಗತ್ತಿಣೈ ಪುರತ್ತಿಣೈ - ಎಂಬೆರಡು ವಿಭಾಗಗಳೂ ಮೆಯ್‍ಪಾಟ್ವಿಯಲ್ (ರಸ) ಉವಮ ಇಯಲ್ (ಉಪಮಾ ಅಲಂಕಾರಶಾಸ್ತ್ರ) ಶೆಯ್ಯುಳಿಯಲ್ (ಛಂದಸ್ಸು) ಎಂಬ ಇತರ ಭಾಗಗಳೂ ಇವೆ. ಕೊನೆಯ ವಿಭಾಗವಾದ ಮರಬು ಇಯಲ್‍ನಲ್ಲಿ ರೂಢಿಯಲ್ಲಿ ವಿಶಿಷ್ಟವಾದ ಪದಗಳನ್ನು ಕುರಿತು (ಉದಾ: ಮರಿ - ಎಂಬುದನ್ನು ಪ್ರಾಣಿವರ್ಗದಲ್ಲೂ ಕರು- ಎಂಬುದನ್ನು ಗೋವರ್ಗದಲ್ಲೂ ಮಗು- ಎಂಬುದನ್ನು ಮನುಷ್ಯವರ್ಗದಲ್ಲೂ ಪ್ರಯೋಗಿಸುವ ರೂಢಿ) ಹೇಳಲಾಗಿದೆ.

ಈ ಕೃತಿಗೆ ಅನೇಕರು ವ್ಯಾಖ್ಯಾನ ಬರೆದಿದ್ದಾರೆ.						(ಎನ್.ಕೆ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ